Friday, October 06, 2006

ಬೆಂಗಳೂರಿನ traffic

ಇಂದು ಮುಂಜಾನೆ office ಗೆ ಬೇಗನೆ ಹೋರಟಿದ್ದೆ. ಪ್ರತಿ ದಿನ 8:30, 8:45 ಹೊತ್ತಿಗೆ ಹೊರಡಿತ್ತಿದ್ದ ನಾನು, ಇಂದು ಏಳು ಕಾಲಿಗೇ (7:15) ಮನೆಯಿಂದ ಹೊರಟೆ. ಅಷ್ಟು ಹೊತ್ತಿಗೆ, ರಸ್ತೆಗಳಲ್ಲಿ ವಾಹನ ಸಂಖ್ಯೆ ಕಡಿಮೆ ಇರುವುದೆಂದು ಭಾವಿಸಿದ್ದೆ. ಆದರೆ, traffic ತುಂಬಾ ಕಡಿಮೆ ಏನೂ ಇರಲಿಲ್ಲ.

ನಾನು ಪ್ರತಿ ದಿನ ಗಾಡಿಯಲ್ಲಿ ಓಡಾಡುವಾಗ, ಬನಶಂಕರಿಯ ಬಸ್ ನಿಲ್ದಾಣದೆಡೆಗೆ ಹೋಗದಿರಲು ಪ್ರಯತ್ನಿಸುತ್ತೇನೆ. ಆದರೆ ಈ ದಿನ, ನನ್ನ ತಮ್ಮನನ್ನು ಶಾಲೆಗೆ ಬಿಡಬೇಕಿತ್ತು. ಹಾಗಾಗಿ, ಬನಶಂಕರಿ ಬಸ್ ನಿಲ್ದಾಣದ ದಾರಿಯಲ್ಲಿ ಹೋದೆ. ಅಲ್ಲಿನ ದುಃಸ್ಥಿತಿ ಏನೆಂದರೆ, ಹತ್ತು ಹೆಜ್ಜೆಗಳ ಅಂತರದಲ್ಲಿ ಎರಡು signalಗಳು ಇವೆ. ಬೆಳಗ್ಗಿನ ಈ ಹೊತ್ತಿನಲ್ಲಿ ಪೋಲಿಸಿನವರು ಇರುವುದಿಲ್ಲವೆಂದು ಜನರು, traffic ನಿಯಮಗಳನ್ನು ಗಾಳಿಗೆ ತೂರಿ, ತಮಗೆ ಮನ ಬಂದಂತೆ ಗಾಡಿಗಳನ್ನು ಓಡಿಸುತ್ತಿದ್ದರು. ಮೊದಲನೆಯ signalನಲ್ಲಿ ಬಲ ತಿರುಗುವಂತಿಲ್ಲ. ಆದರೂ ಒಂದು ಕಾರು ಬಲ ತಿರುಗುವ indicator ಹಾಕಿ, ಆರಾಮಾಗಿ ಬಲಕ್ಕೆ ತಿರುಗಿತು. ನನಗೆ ಕಾನೂನು ಉಲ್ಲಂಘಿಸುವವರನ್ನು ಕಂಡರೆ ಕೆಂಡದಂಥ ಕೋಪ ಬರುತ್ತದೆ. ಆದರೆ ಅಲ್ಲಿ ನಾನು ಏನೂ ಮಾಡುವಂತಿರಲಿಲ್ಲ. ಆ signal ಹಸಿರು ಇದ್ದುದ್ದರಿಂದ, ಮುಂದೆ ಹೋದೆ. ಬಸ್ ನಿಲ್ದಾಣದ ಎದುರು ಎರಡನೆಯ signal ಸಿಕ್ಕಿತು. ಅಲ್ಲಿ ಕೆಂಪು ದೀಪ ಉರಿಯುತ್ತಿದ್ದ ಕಾರಣ, ನಾನು ನನ್ನ ಗಾಡಿಯನ್ನು ನಿಲ್ಲಿಸಿದೆ. ನನ್ನ ಪಕ್ಕದಲ್ಲಿ 2-3 ಆಟೊಗಳು, 2-3 ಬಸ್ ಗಳು signalಅನ್ನು ಕಡೆಗಾಣಿಸಿ ವೇಗವಾಗಿ ಮುಂದೆ ಹೋಗುತ್ತಿದ್ದರು. ಆಗ, ನನ್ನ ಹಿಂದೆ ಒಂದು ಬಸ್ ಬಂದು ಜೋರಾಗಿ horn ಮಾಡಲು ಶುರುಮಾಡಿತು. ನಾನು ತಿರುಗಿ ನೋಡಿದಾಗ, ಅದರ ಚಾಲಕನು, ನಾನೂ ಸಹ traffic ನಿಯಮ ಉಲ್ಲಂಘಿಸಿ ಮುಂದೆ ಹೋಗಿ, ಅವನಿಗೂ ಮುಂದೆ ಹೋಗಲು ದಾರಿ ಮಾಡಿಕೊಡಬೇಕೆಂದು ಸನ್ನೆ ಮಾಡುತ್ತಿದ್ದ. ನಾನು ಅವನಿಗೆ signalನಲ್ಲಿ ಕೆಂಪು ದೀಪ ಇರುವುದನ್ನು ಕೈ ಸನ್ನೆಯಲ್ಲಿ ತೋರಿಸಿದೆ. ಆದರೆ, ಅವನಿಗೆ ತಾಳ್ಮ ಇರಲಿಲ್ಲ. ಅವನು ಜೋರಾಗಿ horn ಮಾಡುತ್ತಲೇ ಇದ್ದನು. ಆದರೆ ನಾನು ಅದಕ್ಕೆ ಕಿವಿ ಕೊಡಲಿಲ್ಲ. ಹಸಿರು ದೀಪ ಬಂದೊಡನೆಯೆ, ನಾನು ಬಲ ತಿರುಗಲು ಹೊರಟೆ. ಆದರೆ ಎದುರುಗಡೆಯಿಂದ ಒಂದು ಆಟೋ ಮತ್ತು ಒಂದು ಬಸ್, ಅವರಿಗಿದ್ದ ಕೆಂಪು ದೀಪವನ್ನು ಕಡೆಗಾಣಿಸಿ ಮುಂದೆ ಬರುತ್ತಿದ್ದರು. ಆ ಆಟೋದವನೆಂತೂ ನನಗೆ ಇನ್ನೇನು ಹೊಡೆಯಬೇಕು ಅನ್ನೊಷ್ಟು ಹತ್ತಿರ ಬಂದು ನಿಲ್ಲಿಸಿದ. ನನಗೂ ರೇಗಿ ಹೋಯಿತು. "red light ಇರೋದು ಕಾಣ್ಸೋಲ್ವಾ sir?" ಎಂದೆ. ಅದಕ್ಕೆ ಅವನು ನಾನೆ ಎನೋ ತಪ್ಪು ಮಾಡಿದ ಹಾಗೆ ನನಗೇ ಜೋರು ಮಾಡಿದ. ಅಲ್ಲೆ ರಸ್ತೆ ಮಧ್ಯದಲ್ಲಿ ನಿಂತು ಅವನೊಡನೆ ಜಗಳ ಮಾಡುವಷ್ಟು ಸಮಯವಾಗಲಿ, ತಾಳ್ಮೆಯಾಗಲಿ ನನಗಿರಲಿಲ್ಲ. ಅವನನ್ನು ಮನದಲ್ಲಿಯೆ ಬೈದುಕೊಂಡು ಮುಂದೆ ಸಾಗಿದೆ.

ಬನಶಂಕರಿಯ ನಂತರ, ರಸ್ತೆಗಳೆಲ್ಲ ಖಾಲಿಯಾಗೇ ಇತ್ತು. ಮನೆಯಿಂದ officeಗೆ ಬರಲು ಇಂದು 35-40 ನಿಮಿಷ ಹಿಡಿಯಿತು. ಎಂಟು ಗಂಟೆಯ ನಂತರ ಹೋರಟಿದ್ದರೆ, ಒಂದು ಕಾಲು ಗಂಟೆಯಾದರೂ ಹಿಡಿಯುತ್ತಿತ್ತು. ಬೆಳಗ್ಗೆ ಎಷ್ಟು ಬೇಗ ಹೊರಡುತ್ತೀನೊ, ಅಷ್ಟು ಪ್ರಯಾಣದ ಸಮಯ ಕಡಿಮೆ ಮಾಡಬಹುದು.

ಬೆಂಗಳೂರು, ಅದರಲ್ಲೂ ಇಲ್ಲಿನ traffic ಸ್ಥಿತಿ, ಎಷ್ಟು ಹದಗೆಟ್ಟಿದೆ. 4-5 ವರ್ಷಗಳ ಕೆಳಗೆ ಬೆಂಗಳೂರಿನ ಸ್ಥಿತಿ ಹೀಗಿರಲಿಲ್ಲ. ಇನ್ನು 2-3 ವರ್ಷಗಳ ನಂತರದ ಸ್ಥಿತಿಯ ಬಗ್ಗೆ ಯೋಚಿಸಿದರೆ ವ್ಯಥೆಯಾಗುತ್ತದೆ.